Thursday, August 30, 2012

ವಿಪರ್ಯಾಸ

 ವಿಪರ್ಯಾಸ 




ಬದುಕು ವಿರಹ ವೇದನೆ 407ನಲ್ಲಿ ಕಿಕ್ಕಿರಿದ ಜನ 
ಬಸ್ಸು ಕಾಲಿ ಕಾಲಿ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಿಲ್ಲ 
ಕಾರಣ ಮೊಬೈಲು ಅದಿದ್ದರೆ ಬರಿ ಐಲು 
ಗುಪ್ತಗಾಮಿನಿಯಂತೆ ಬರುವ ಮೆಸೇಜು 
ಒಳಗೊಳಗೆ ಏನೋ ಖುಷಿ, ಕಾತರ. 
ಕಾಲ್ ಮಾಡಿದರೆ out off coverage area.  
ನವೆಂಬರ್ ನಲ್ಲೂ ಮಾತಿಗೊಮ್ಮೆ  
ಯಾ ಟೆಲ್ಮಿ  ಎಂಬ ಅಂಗ್ಲ ಪದಗಳು 
ಕನ್ನಡವೇ ಉಸಿರೆಂದವರಿಗೆ ಅಪೊಲೋದಲ್ಲಿ  
ಅಕ್ಷಿಜನ್ ಹಾಕಲಾಗಿದೆ
ಬಿಳಿಯ ನರ್ಸಿನ ಕೈ ಸೋಕಿ ಮನಸು ಮಾಯಾಮೃಗ 
ರೂಪಾಯಿಗೆ ಎರಡೇ ಗಣೇಶ್ ಬೀಡಿ 
ಸಿಗರೇಟು ದುಬಾರಿ 
ಡಿಸೆಂಬರ್ ಚಳಿಯಲ್ಲು ಮಲ್ಯ ನೆನಪಾಗುತ್ತಾನೆ 
ಅವಳ ಕಾಲೇಜ್ ಮುಂದೆ ನಿಂತು 
ಕಾಯುವ ಸಂಭ್ರಮ 
ನೀನು ನಕ್ಕರೆ ಹಾಲು ಸಕ್ಕರೆ 
ಸ್ವರ್ಗದಲ್ಲಿ ಸೆರೆವಾಸ 
ಜೇಬಿನಲ್ಲಿ ಹತ್ತೇ ರೂಪಾಯಿ 
ರಾತ್ರಿ ಕನಸು ಚಂದಮಾಮ 
ಬೆಳಗೆ ಬದುಕು ಉದಯ ಕಿರಣ. . .

Tuesday, August 28, 2012

ನೆನಪಾಗುವುದಿಲ್ಲ

 

ನೆನಪಾಗುವುದಿಲ್ಲ 

 

 

ಈಗೀಗ ನಿನ್ನ ನೆನಪಾಗುವುದಿಲ್ಲ 
ಸಂಜೆಯಲ್ಲಿ ದುಡಿದ ಆಯಾಸ 
ಕೈ ಬೀಸಿ ಕರೆಯುತ್ತದೆ 
ಊರ ಹೊರಗಿನ ಮಧ್ಯದಂಗಡಿ 

ಮಂದ ಬೆಳಕಿನಲ್ಲಿ ಮುಖ ಕಾಣಿಸುವುದಿಲ್ಲ 
ಮಾತು ಕೇಳಿಸುತ್ತವೆ 
ಮೇಜಿನ ಮೇಲೆ ಗ್ಲಾಸಿನ ತುಂಬ 
ಉಕ್ಕಿ ಹರಿಯುವ ಬಿಯರು 
ಬೆರಳ ಸಂದಿಯಲ್ಲಿ ಅರ್ಧ 
ಉರಿದ ಸಿಗರೇಟು 
ನಿನ್ನ ನೆನಪಾಗುವುದಿಲ್ಲ 

ಊಟದ ಶಾಸ್ತ್ರ ಮುಗಿಸುತ್ತೇನೆ 
ಬಿಡಿ ದೀಪಗಳು ನಿದ್ರಿಸುವುದಿಲ್ಲ 
ಊರ ಜನರಿಗೆಲ್ಲ ಅರ್ಧ ಬೆಳಕಾಗಿರುತ್ತದೆ 
ರಾತ್ರಿ ಪಾಳಿಯ ನಾಯಿಗಳು ಬೊಗಳುತ್ತಿರುತ್ತವೆ 
ಒಬ್ಬಂಟಿ ನಾನು ರಸ್ತೆಯಲ್ಲಿ 
ನಿನ್ನ ನೆನಪಾಗುವುದಿಲ್ಲ 

ಯಾವ ತೊಂದರೆ ಇಲ್ಲದೆ ಮನೆ  ಸೇರುತ್ತೇನೆ 
ಬಾಗಿಲು ಹಾಕುವುದ ಮರೆಯುವುದಿಲ್ಲ 
ಮಂಚ ಹಾಸಿಗೆ ಬೇಕೆಂದಿಲ್ಲ 
ನೆಲದ ಮೇಲೆ ಮಲಗುತ್ತೇನೆ ಕಣ್ಣು ಮುಚ್ಚಿ 
ಕನಸುಗಳಿರುತ್ತವೆ . . . .
ನೀನಿರುವುದಿಲ್ಲ. . . . . .!