ನೆನಪಾಗುವುದಿಲ್ಲ
ಈಗೀಗ ನಿನ್ನ ನೆನಪಾಗುವುದಿಲ್ಲ
ಸಂಜೆಯಲ್ಲಿ ದುಡಿದ ಆಯಾಸ
ಕೈ ಬೀಸಿ ಕರೆಯುತ್ತದೆ
ಊರ ಹೊರಗಿನ ಮಧ್ಯದಂಗಡಿ
ಮಂದ ಬೆಳಕಿನಲ್ಲಿ ಮುಖ ಕಾಣಿಸುವುದಿಲ್ಲ
ಮಾತು ಕೇಳಿಸುತ್ತವೆ
ಮೇಜಿನ ಮೇಲೆ ಗ್ಲಾಸಿನ ತುಂಬ
ಉಕ್ಕಿ ಹರಿಯುವ ಬಿಯರು
ಬೆರಳ ಸಂದಿಯಲ್ಲಿ ಅರ್ಧ
ಉರಿದ ಸಿಗರೇಟು
ನಿನ್ನ ನೆನಪಾಗುವುದಿಲ್ಲ
ಊಟದ ಶಾಸ್ತ್ರ ಮುಗಿಸುತ್ತೇನೆ
ಬಿಡಿ ದೀಪಗಳು ನಿದ್ರಿಸುವುದಿಲ್ಲ
ಊರ ಜನರಿಗೆಲ್ಲ ಅರ್ಧ ಬೆಳಕಾಗಿರುತ್ತದೆ
ರಾತ್ರಿ ಪಾಳಿಯ ನಾಯಿಗಳು ಬೊಗಳುತ್ತಿರುತ್ತವೆ
ಒಬ್ಬಂಟಿ ನಾನು ರಸ್ತೆಯಲ್ಲಿ
ನಿನ್ನ ನೆನಪಾಗುವುದಿಲ್ಲ
ಯಾವ ತೊಂದರೆ ಇಲ್ಲದೆ ಮನೆ ಸೇರುತ್ತೇನೆ
ಬಾಗಿಲು ಹಾಕುವುದ ಮರೆಯುವುದಿಲ್ಲ
ಮಂಚ ಹಾಸಿಗೆ ಬೇಕೆಂದಿಲ್ಲ
ನೆಲದ ಮೇಲೆ ಮಲಗುತ್ತೇನೆ ಕಣ್ಣು ಮುಚ್ಚಿ
ಕನಸುಗಳಿರುತ್ತವೆ . . . .
ನೀನಿರುವುದಿಲ್ಲ. . . . . .!
No comments:
Post a Comment