Tuesday, June 30, 2015


                                        ಒಂದಷ್ಟು  ತುಣುಕುಗಳು 
ಇಷ್ಟಿಷ್ಟೇ ಕರಗುತ್ತಿರುವ
ನಮ್ಮೂರ ಕೆರೆ
ಕೆರೆಗೆ ಬಿದ್ದ ಸಂಜೆಯ ಸೂರ್ಯ. . .
 *******************************
ನಗುತ್ತವೆ ಹೂವುಗಳು
ಮತ್ತೊಬ್ಬರ ನಗುವಾಗಲು. . .
 ***************************
ಪದಗಳಿಗೆ ನಿಲುಕದ
ಕವಿತೆಯೊಂದಿದ್ದರೆ
ಅದು ನಿನ್ನ ಮೌನ ಒಂದೇ. . .
 ************************
ನೀನೆ ನನ್ನ ಕನಸಾಗಿದ್ದೆ
ಆದರೆ ನೀನು ಮತ್ಯಾರದೋ
ಕನಸು ಕಾಣುತ್ತಿದ್ದೆ
ಹಾಗಾಗಿ ವಿದಾಯಾ
ನಿನ್ನ ಕನಸು ನನಸಾಗಲಿ. . .
 ****************************
ಕಾಣೆಯಾದ ಹೃದಯಕ್ಕೆ
ಹುಡುಕಾಟ ನಡೆದಿದೆ
ಚೂರೆಚೂರು ಸಹಕರಿಸು
ಸ್ವಲ್ಪ ಸುಳಿವು ಸಿಕ್ಕಿದೆ. . .
 **************************
ಕನಸುಗಳಲೂ ನೀನಿಲ್ಲ
ಮನಸಲ್ಲು ನೀನಿಲ್ಲ
ಕಾಡುವ ಪ್ರಶ್ನೆಗಳಿಗೆ ಉತ್ತರವೂ ಇಲ್ಲ
ತಿರುಗಿ ಬಾ ಎಂದು ನಾ ನಿನ್ನ
ಕಾಡುವುದಿಲ್ಲ ಬೇಡುವುದಿಲ್ಲ
ಮತ್ಯಾರೋ ಬಂದಾರು ಒಲವಿನರಮನೆಯ
 ಹೊಸಿಲ ಮೇಲೆ ದೀಪ ಹಚ್ಚಲು
ನಿನ್ನ ನೆನಪಿನ ಕತ್ತಲೆಯ ಅಳಿಸಲು. . .
 **********************************
ಬಹುಶಃ ಕಾಲದಲ್ಲಾಗಿದ್ದರೆ
ಸೀತೆ ಕಾಡಿಗೆ ಹೋಗುತ್ತಿರಲಿಲ್ಲ
ಮೀಡಿಯಾಗೆ ಹೋಗುತ್ತಿದ್ದಳು!
*************************************
ಎಲ್ಲಾ ಲೈಕ್ ಮಾಡಲಿ ಎಂದು ನಾನು ಬರೆಯುವುದಿಲ್ಲ
ಬರೆಯುವುದು ಅನಿವಾರ್ಯ ಕರ್ಮ ನನಗೆ
ಓದುವವರಿಹರೆಂದು ನಾ ಬಲ್ಲೆ ಅದರಿಂದ
ಬರೆಯುವೆನು ಎಂದಿನಂತೆ ಯಾರು ಲಾಗ್ಔಟ್ ಅದರು ನನಗಿಲ್ಲ ಚಿಂತೆ. . .
******************************************************************************** 
ರಸ್ತೆ ಬದಿಯಲ್ಲಿ ಸಂಜೆಗೆ ನಲುಗುತ್ತಿರುವ ಹೂಗಳು ಮತ್ತು ಸೇಲಾಗದ ಕನಸುಗಳು. . .
 ****************************************************************************
ಇಂದಿಗೆ shift ಆದ ನೆನ್ನೆಯ ನೆನಪುಗಳು
ಮತ್ತು ಎಂದಿಗೂ ಮುಗಿಯದ ನಾಳಿನ ಕನಸುಗಳು. . .
 **********************************************************
ನೆನಪು. . .
ಬೇಸಿಗೆಯಲ್ಲಿ ಬತ್ತುವುದಿಲ್ಲ
ಮಳೆಗಾಲದಲ್ಲಿ ತುಂಬಿ ಹರಿಯುವುದಿಲ್ಲ. . .
 *************************************************
ಹಳೆಯ ಪೇಜಿನಲ್ಲಿ ಬರೆದ
ಹೊಸ ಹಾಡುಗಳು
ಹೊಸ ಕವಿತೆಗಳ ಸಾಲಿನಲ್ಲಿ
ಹಳೆಯ ನೆನಪುಗಳು. . .
 *******************************
ಊರಾಚೆಗಿನ ಕಾಡು
ಕಾಡ ನಡುವೆ ಸವೆದ ಕಾಲು ದಾರಿ
ದಾರಿಯ ಕೊನೆಗೊಂದು ನದಿ
ದಂಡೆಯಲ್ಲಿ ಮರಳ ರಾಶಿ
ಮರಳ ರಾಶಿಯ ಮೇಲೆ ಮೈ ತಾಕಿಸಿ ಕುಂತಾಗ ಬೆಳದಿಂಗಳು. . .
 **********************************************************************
ಯಾವುದಕ್ಕು ಇರಲೆಂದು ಕನಸೊಂದ ಕಟ್ಟಿರುವೆ
ಹೇಳಲೆಂದು ನಿನಗೆ ಗುಟ್ಟೊಂದ ಇಟ್ಟಿರುವೆ. . .
 **********************************************
ಹೃದಯ ಜೋರು ನಗುತಿದೆ
ಎಲ್ಲೊ ಜಾರಿ ಬಿದ್ದಿದೆ. . .
 ********************************
ಮರಳಿ ಬರುವೆನು
ಮುಡಿದ ಮಲ್ಲಿಗೆ ಬಾಡುವುದೊರೊಳಗೆ
ಹೊತ್ತು ತರುವೆನು
ಕನಸಿನ ಬುತ್ತಿಯ
ಇರುಳು ಕವಿಯುವುದೊರೊಳಗೆ. . .
 ******************************************
ಇಳಿ ಸಂಜೆ
ಮೋಡ ಕವಿದ ಆಕಾಶ
ಸಣ್ಣಗೆ ಮಳೆ
ಅಸ್ಪಷ್ಠವಾಗಿ ಕಾಣುವ ದೂರದ ಗುಡ್ಡ
ಯಾವುದಕ್ಕು ಉತ್ತರಿಸದ ಅವಳು
ಅವಳ ಮೌನದಲ್ಲೆ ಉತ್ತರ
ಹುಡುಕುವ ವ್ಯರ್ಥ ಪ್ರಯತ್ನದಲ್ಲಿ
ಕಳೆದುಹೋದ ನಾನು
ತಬ್ಬಲಿ ಅನುರಾಗ. . .
 ****************************************
ಹೀಗೆ ಎಲ್ಲೋ ಬೇಟಿಯಾದವರು
ಹಳೆಯ ಗೆಳೆಯರಂತೆ
ಮಾತ್ತಿದ್ದರು ಆಡಲಿಲ್ಲ
ಮನಸಿದ್ದರು ಹೇಳಲಿಲ್ಲ
ಕಥೆಯಾಗಿ, ಕವಿತೆಯಾಗಿ ಕಾಲದ
ಕಣ್ಣಲ್ಲಿ ಕಳೆದು ಹೋದರು. . .
******************************************* 
ಹುಟ್ಟಿದೂರಿಗು ಬೆಳದ ಊರಿಗೂ
ನಾಲ್ಕು ಮೈಲಿಯ ಒಂಟಿ
ಕಾಡು ದಾರಿ
ಕಾಡುದಾರಿಗೊಂದಷ್ಟು ಕತೆಗಳು
ಹಲವು ಹುಟ್ಟಿದವು
ಕೆಲವು ಕಟ್ಟಿದವು . . .
 **********************************************
ಅಪರಾತ್ರಿಯಲ್ಲಿ ಇದ್ದಕಿದಂತೆ ಎಚ್ಚರವಾಗಿ
ಕಣ್ಣು ತೆರೆದರೆ ಎಲ್ಲ ಮಂಜು ಮಂಜು
ಕನಸಿನಲ್ಲಿ ನೆರಳಿನಂತೆ ಕಂಡದ್ದು
ಕಾಡಿದ್ದು ಅವಳೆನಾ ಎಂಬ ಅನುಮಾನ
ಹಿತ್ತಲಿನಲ್ಲಿ ಮೆಲುಕು ಹಾಕುತ್ತಿರುವ ಆಕಳು
ಅಂಗಳದಿ ಚೆಲ್ಲಿದ ಪಾರಿಜಾತ
ಹೊರಗಿನ್ನು ಮಸುಕು ಮಸುಕು
ನನಗೊ ಹಳೆಯ ನೆನಪುಗಳ ಮೆಲುಕು. . .
****************************************************
ಸಾಗಿದಷ್ಟು ದಾರಿ ದೂರ
ಒಂದರಿಂದ ಮತ್ತೊಂದು ಕವಲೊಡೆದು ಹೆಜ್ಜೆ ಭಾರ
ಒಲವಿನರಮನೆಗೆ ಸಾಗುವ ಹಾದಿಯಲ್ಲಿ
ಬೆಳದಿಂಗಳ ಚಂದ್ರನ ಮತ್ತೊಂದು ಇರುಳು
ಕಾಡುವ ನೆನಪುಗಳೆಡೆಗೊಮ್ಮೆ ಕಣ್ಣಾಡಿಸು
ಬೆಳಕು ಹರಿದು ಇರುಳಾಗುವ ಮುನ್ನ
ಕಾಣದ ಹೂವಿನ ಪರಿಮಳಕ್ಕೆ ಮರುಳಾಗಬೇಡ
ಬದುಕಿನಲ್ಲಿ ಕಳೆದುಹೋಗುವುದು ಇನ್ನೂ ಇದೆ. . .
******************************************************* 
ಅವಳು ಶುದ್ದ ಸ್ನೆಹವನ್ನೂ ತಪ್ಪಾಗಿ ಭಾವಿಸಿದಂತಿದೆ. . .
ಅವಳ ಕಪ್ಯೂಟರ್ನಲ್ಲು ಮದರ್ ಬೋರ್ಡ್ ಇದ್ದರು ಭಾವನೆಗಳು ಅರ್ಥವಾಗುತ್ತಿಲ್ಲ. . .
ಉತ್ತರಿಸಬೇಕಾದ ಅವಳು ದೂರ ಉಳಿದಿದ್ದಾಳೆ. . .
 *****************************************************************
ಮೂರು ಸಂಜೆಯ ಹೊತ್ತಲ್ಲಿ
ಜೊತೆಯಾಗಿ ನಡೆದಂತ
ಕಾಡು ದಾರಿಯಲ್ಲಿ
ಈಗಂತೂ ಯಾವುದೆ ಹೆಜ್ಜೆ ಗುರುತ್ತಿಲ್ಲ. . .
************************************************** 
ದುಖಿಃಸಲು ಕಾರಣವಿಲ್ಲದೆ
ನಿನ್ನ ನೆನಪುಗಳನ್ನು ಕೆದಕಿ ಕುಳಿತಿದ್ದೇನೆ. . .
 ******************************************************
ಹರಿವ ತೊರೆಗೆ ಇಳಿಬಿಟ್ಟ
ನಿನ್ನ ಬಂಗಾರದ ಕಾಲಿಗೆ
ಮತ್ಸ್ಯಗಳ ಮುತ್ತಿನೊಕುಳಿ . . .

                                                                                  : PÁwðPï ºÀÄArªÀiÁ¼À

Tuesday, September 11, 2012

ಆ ಬೀದಿಯಲ್ಲಿ ಗಣೇಶನಿಲ್ಲ

ಆ ಬೀದಿಯಲ್ಲಿ ಗಣೇಶನಿಲ್ಲ



ನಾಲ್ಕು ಪಥದ ರಸ್ತೆಯಲ್ಲಿ ಕಾರು ಚಲಿಸುತ್ತಿತ್ತು ಮನಸ್ಸಿನಲ್ಲಿ ಗತಃಕಾಲದ ನೆನಪುಗಳು ಘಟನೆಗಳಷ್ಟೆ ಮುಖ್ಯವಾದ್ದರಿಂದ ಇಸವಿ, ತಾರೀಖು, ದಿನ, ಊರು, ಸಮಯ ಅಷ್ಟು ಮುಖ್ಯವಲ್ಲ. ಸ್ವಲ್ಪ ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿದ್ದಾಗ ನಮ್ಮ ಕುಟುಂಬವು ಅಲ್ಲೆ ಇತ್ತು. ಚಿಕ್ಕಂದಿನಲ್ಲಿ ಎಲ್ಲರಿಗೂ ದೇವರ ಮೇಲೆ ಇರುವಂತಹ ಭಯ ಭಕ್ತಿ ನನಗೂ ಇತ್ತು ಅದರಲ್ಲು ಗಣೇಶನೆಂದರೆ ಏನೋ ಒಂದು ಅಭಿಮಾನ.
ನಮ್ಮ ಮನೆಯಿಂದ ಎಡಕ್ಕೆ ತಿರುಗಿ ರಸ್ತೆ ದಾಟಿದರೆ ಆ ಬದಿಯಲ್ಲಿ ಒಂದು ಗಣೇಶನ ದೇವಸ್ಥಾನ. ಅಲ್ಲಿ ಪ್ರತಿನಿತ್ಯ ಪೂಜೆಗಳು ನಡೆಯುತ್ತಿದ್ದವು. ನಮ್ಮ ಮನೆಯಂಗಳದಲ್ಲಿ ಬಿಡುತ್ತಿದ್ದ ಹೂಗಳನ್ನು ದಿನ ನಿತ್ಯ ಬೆಳಿಗ್ಗೆ, ಸಂಜೆ ಕೊಟ್ಟು ನಮಸ್ಕರಿಸಿ ಬರುವುದು ರೂಢಿಯಾಗಿತ್ತು.
ಹೀಗೆ ಒಂದು ಬೆಳಗ್ಗೆ ಅರ್ಚಕರಿಗೆ  ಹೂವು ಕೊಡುತ್ತಿರಬೇಕಾದರೆ ಹಿಂದಿನಿಂದ ಒಂದು ಹೆಣ್ಣು ಧ್ವನಿ ಕೇಳಿಸಿತು ಹುಡುಗು ಸಹಜ ಕುತೂಹಲದಿಂದ ತಿರುಗಿ ನೋಡಿದೆ ಹೂ ಹಿಡಿದು ಹೂವಿನಂತ ಚೆಲುವೆಯೊಬ್ಬಳು ನಿಂತಿದ್ದಳು. ದೇವಲೋಕದ ಅಪ್ಸರೆ ರಂಭೆ, ಊರ್ವಶಿ, ಮೇನಕೆ ಇವರ್ಯಾರು ಕಾಣದೆ ಅವಳಲ್ಲಿ ಅವಳನ್ನು ಮಾತ್ರ ಕಂಡೆ. ಇಲ್ಲೆ ಹುಟ್ಟಿ ಬೆಳೆದಂತ ಚೆಲುವೆ. ನನಗೆ ಬುದ್ದಿ ಬಂದಾಗಲಿಂದಲು ರಂಭೆ, ಊರ್ವಶಿ, ಮೇನಕೆಯರಿಗೆ ವಯಸ್ಸಾದ ಕಥೆ ಕೇಳಿಲ್ಲ ಅವರು ಯಾವಾಗಲು ಚಿರ ಯುವತಿಯರು. ನಾವು ಕೇಳಿದ, ಓದಿದ, ನೋಡಿದ ಕಥೆ, ಸಿನಿಮಾ ಇತ್ಯಾದಿಗಳಲ್ಲಿ ಬರುವ ಪಾತ್ರಗಳನ್ನು ನಿಜವೆಂದು ಭ್ರಮಿಸಿರುತ್ತೇವೆ. ನಮಗೆ ವಯಸ್ಸಾದರೂ ನಾವು ಕಂಡು ಕೇಳಿದ ಪಾತ್ರಗಳಿಗೆ ವಯಸ್ಸಾಗುವುದಿಲ್ಲ.
ನಾನು ತಿರುಗಿ ನೋಡಿದ್ದು ಅವಳಿಗೆ ತಿಳಿದಿರಬಹುದು ಅಥವಾ ಅದರ ಪರಿವೆ ಇಲ್ಲದಿರಬಹುದು ಅವಳು ಅರ್ಚಕರಿಗೆ ಹೂ ಕೊಡುತ್ತಿದ್ದಳು. ಒಮ್ಮೊಮ್ಮೆ ಸಂಜೆ ಬಿಡುವಾದಾಗ ದೇವಸ್ತಾನದ ಅರ್ಚಕರ ಜೊತೆ ಮಾತಿಗಿಳಿಯುತ್ತಿದ್ದೆ. ಅವರು ಏನು ಹೇಳಿದರು ಎಂಬುದು ಅಸ್ಪಷ್ಟವಾಗಿದೆ ಆದರು ಪ್ರಯತ್ನಿಸುತ್ತೇನೆ. ಮೊದಲು ದೇವಸ್ಥಾನದ ಪೂಜೆಯನ್ನು ಅವರ ದೊಡ್ಡಪ್ಪ ಮಾಡುತ್ತಿದ್ದರಂತೆ. ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ಇವರಿಗೆ ವೇದ ಮಂತ್ರಗಳನ್ನು ಕಳಿಸಿ ಇದೇ ನಿನ್ನ ವೃತ್ತಿ ಎಂದರಂತೆ ಹಾಗೆ ಹೇಳುವಾಗ ಅವರ ಮುಖದಲ್ಲಿ ಯಾವುದೆ ಭಾವ ವ್ಯಕ್ತವಾಗಲಿಲ್ಲ್ಲ ಬಹುಶಃ ಅವರು ತಮ್ಮ ವೃತ್ತಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು  ಅನ್ನಿಸುತ್ತದೆ. ಈಗ ಇವರಿಗು ಸಾಕಷ್ಟು ವಯಸ್ಸಾಗಿದೆ ಒಬ್ಬನೆ ಮಗನನ್ನು ಶೃಂಗೇರಿಯಲ್ಲಿ ವೇದಾಭ್ಯಾಸಕ್ಕೆ ಬಿಟ್ಟಿದ್ದಾರೆ ಅವನು ಇವರ ಕಂಟ್ಯುನಿಟಿ.!
ಹೇಗ್  ನಡೆಯುತ್ತೆ? ಜನ ಬರ್ತಾರ? ನಿಮ್ಮ ಜೀವನಕ್ಕೆ ಸಾಕಾಗುತ್ತ ಇಲ್ಲಿಯ ಸಂಪಾದನೆ, ಕೇಳಿದೆ. ಪರವಾಗಿಲ್ಲ . . . . ಜನ ಸಾಕಷ್ಟು ಬರ್ತಾರೆ ಬಿಡುವಿನಲ್ಲಿ ಪೌರೋಹಿತ್ಯ ಮಾಡುತ್ತೇನೆ ಬಂದವರಿಗೆ ಇಲ್ಲೆ ಪಂಚಾಂಗ ನೋಡಿ ಹೇಳುತ್ತೇನೆ ಅಪ್ಪನ ಆಸ್ತಿ ಅಂತ ಮನೆ ಇದೆ, ಜೀವನಕ್ಕೆ ಸಾಕು ದೇವರು ಹೀಗೆ ಇಟ್ಟಿರ್ಲಿ ಎಂದು ನಿಟ್ಟುಸಿರು ಬಿಟ್ಟರು.
ಈ ಮಧ್ಯೆ ಹಲವಾರು ಬಾರಿ ನಾನು ಆ ಹುಡುಗಿಯನ್ನು ಸಂದಿಸಿದ್ದೆ ಆದರು ಯಾವತ್ತು ಮಾತನಾಡಿಸುವ ಪ್ರಯತ್ನ ಮಾಡಲಿಲ್ಲ ಬಹುಶಃ ನನ್ನ ego ಅದಕ್ಕೆ ಅಡ್ಡ ಬಂತು ಅಂತ ಈಗ ಅನ್ನಿಸುತ್ತಿದೆ. ಒಮ್ಮೊಮ್ಮೆ ಮುಖಾ ಮುಖಿ ಬೇಟಿಯಾದಾಗ ಕಣ್ಣಲ್ಲೆ ನಗುತ್ತಿದ್ದೆವು ಅದನ್ನು ಯಾವ ರೀತಿ ಬೇಕಾದರು ಅರ್ಥೈಸಬಹುದಿತ್ತು ಆದರೆ ನಾನದರ ಗೋಜಿಗೆ ಹೋಗಲಿಲ್ಲ.
ಕಾಲ ಸರಿದಂತೆ ಕಾರಣಾಂತರಗಳಿಂದ ನಮ್ಮ ಕುಟುಂಬ ಉರು ಬಿಡಬೇಕಾಯಿತು ಮತ್ತೆ ಅದರ ನೆನಪಾಗಲಿಲ್ಲ. ಆದರೆ ಇಂದು ಯಾವುದೊ ಕೆಲಸದ ನಿಮಿತ್ತ ಆ ಊರಿಗೆ ಹೋಗಬೇಕಾಗಿ ಬಂದದ್ದರಿಂದ ಇದೆಲ್ಲ ನೆನಪಾಯಿತು. ಆಗಿದ್ದ ಕಿರು ದಾರಿ ನನ್ನನೇ ಅಣಕಿಸುವಷ್ಟು ಸಿಂಗಾರಗೊಂಡಿತ್ತು ಅಲ್ಲಿದ್ದ ದೇವಸ್ಥಾನವು ಕಾಣಲಿಲ್ಲ. ಯಾರೊ ಹೇಳಿದರು ಆ ದೇವಸ್ಥಾನವನ್ನು ರಸ್ತೆ ಅಗಲಿಕರಣದ ಸಮಯದಲ್ಲಿ ಒಡೆದು ಹಾಕಿದರು ಎಂದು, ಹಾಗಾದರೆ ಆ ಅರ್ಚಕರು ಎಲ್ಲಿಗೋದರು, ಆ ಹುಡುಗಿ ಈಗ ಹೇಗಿರಬಹುದು, ಅರ್ಚಕರ ಮಗ ಈಗೇನು ಮಾಡುತ್ತಿರಬಹುದು, ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನಿಗೆ ವಿಘ್ನವೆ? ಎಂದು ಯೋಚಿಸುತ್ತಿದ್ದೆ. ರಸ್ತೆಯಲ್ಲಿ ಹೋಗಿ ಬರುವ ಜನರು ಅಲ್ಲಿನ್ನೂ ದೇವರಿದ್ದಾನೆ ಎಂಬ ನಂಬಿಕೆಯಲ್ಲಿ ಕ್ಷಣಕಾಲ ನಿಂತು ಕೈ ಮುಗಿದು ಮುನ್ನಡೆಯುತ್ತಿದ್ದರು. . .


Monday, September 10, 2012

ಅಲೆಮಾರಿ

ಅಲೆಮಾರಿ 



ಹೊಂಬಿಸಿಲು ತುಂಬಿದ ಹಾದಿ 
ನಾ ಸಾಗುತ್ತಿದ್ದೇನೆ 
ಯಾಕೋ ಇದ್ದ ಊರು ತುಂಬ ಬೋರು 

ನಿನಗೆ ಹೇಳದೆ ಹೊರಟಿದ್ದೇನೆ ಎಂದು 
 ಬೇಸರ ಪಡಬೇಡ 
ಹಿಂತಿರುಗಿ ಬರುವ ಭರವಸೆ ನನಗಿಲ್ಲ 
ಮತ್ತೇಗೆ ನಿನನ್ನು ನಂಬಿಸಲಿ 

ಹೊಸಲಿನ ಮೇಲೆ ದೀಪ ಹಚ್ಚಿ 
ಅಂಗಳದಿ ಪುಟ್ಟ ಕಣ್ಣುಗಳಲ್ಲಿ ನಿರೀಕ್ಷೆ 
ಇಟ್ಟು ಕಾಯಬೇಡ 
ಪ್ರೀತಿಯೆಂಬುದು ಯಾವತ್ತು ಕಾಡಲೇ ಇಲ್ಲ 
ಬರಿ ಕನವರಿಕೆಯಾಗೇ ಉಳಿಯಿತು 
ಮನಸ್ಸಿನ ತುಮುಲಗಳು ಎಂದು ಮುಗಿಯುತ್ತವೊ . . .?

ಇಲ್ಲದಿದ್ದರೆ ಹೀಗೆ ಫಕೀರನ ಹಾಗೆ ಅಲೆಯಬೇಕಿತ್ತೆ 
ರಸ್ತೆ ಬದಿಯ ಮರದ ಕೆಳಗೊಂದಿಷ್ಟು ನಿದ್ದೆ 
ಹರಿವ ತೊರೆಯ ಬೊಗಸೆ ನೀರು 
ಕತ್ತಲ ರಾತ್ರಿಯಲ್ಲಿ ಗುರುತಿಲ್ಲದ ಊರು 

ಅಲ್ಯಾವುದೋ ಬೋರ್ಡಿಲ್ಲದ ಮನೆಯಂತ ಗುಡಿಸಲು 
ಅಲ್ಲಿ ಒಂದು ಗ್ಲಾಸು ಟೀ ಎರಡು ಬನ್ನು 
ಅದಷ್ಟೆ ಅವತ್ತಿನ ಊಟ 
ಮತ್ಯಾವುದೋ ದಾರಿ  ಮತ್ಯಾವುದೋ ತಿರುವು 
ಬದುಕು ಸಾಗುತ್ತಿರುತ್ತದೆ . . .
 

ಮಾಡ್ರನ್ ಸರ್ಚ್

ಮಾಡ್ರನ್ ಸರ್ಚ್ 

ಅವಳ ಪ್ರೀತಿಯ ಬಗ್ಗೆ ಇಂಟರ್ನೆಟ್ನಲ್ಲಿ 
ಮಾಹಿತಿ ಇಲ್ಲ 
ಎಲ್ಲೋದಳು ಎಂದು ಹುದುವಲ್ಲಿ ಹುಡುಕುವಲ್ಲಿ 
ಗೂಗಲ್ ಸೋತಿದೆ 
ಫೇಸ್ ಬುಕ್ಕಿನಲ್ಲಿ ಅವಳ ಮುಖ ಕಾಣುತ್ತಿಲ್ಲ 
ಕಾಲ್ ಮಾಡಿದರು ರೀಚ್ 
ಅಗದಿರುವಷ್ಟು ದೂರ ಹೋಗಿದ್ದಾಳೆ 
ತಿರುಗಿ ಬರುತ್ತಾಳೆಂಬ ಸಿಗ್ನಲ್ ಸಿಗುತ್ತಿಲ್ಲ 
ಮಾತಿಗೆ ಬೆಲೆ ಇದ್ದದ್ದು 
ನಿಮಿಷಕ್ಕೆ ಮೂವತ್ತು ಪೈಸ 
ಅದರ ಅವಧಿ ಈಗ ಮುಗಿದಿದೆ 
ಇನ್ ಬಾಕ್ಸ್ ನಲ್ಲಿ ಎಂದೋ 
ಅವಳು ಕಳಿಸಿದ್ದ ಸ್ವೀಟ್ ನಥಿಂಗ್ ಮೆಸೇಜ್ 
ಓದುತ್ತ ಕೂರುವ ಆಸಕ್ತಿ ನನಗಿಲ್ಲ 
ಮತ್ತೊಂದು ಸಾಂತ್ವನದ ಮಡಿಲಿಗಾಗಿ 
ಕೈ ಚಾಚುತ್ತೇನೆ 
"ಬಡ್ಡಿ ಮಗನೆ ನಿಂದು ಇದೆ ಆಯ್ತು "
ಎಂದು ಮನಸ್ಸು ರೇಗುತ್ತದೆ 
ನಾನು ತುಟಿಯಂಚಿನಲ್ಲಿ ನಗುತ್ತೇನೆ . . .!

Thursday, August 30, 2012

ವಿಪರ್ಯಾಸ

 ವಿಪರ್ಯಾಸ 




ಬದುಕು ವಿರಹ ವೇದನೆ 407ನಲ್ಲಿ ಕಿಕ್ಕಿರಿದ ಜನ 
ಬಸ್ಸು ಕಾಲಿ ಕಾಲಿ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಿಲ್ಲ 
ಕಾರಣ ಮೊಬೈಲು ಅದಿದ್ದರೆ ಬರಿ ಐಲು 
ಗುಪ್ತಗಾಮಿನಿಯಂತೆ ಬರುವ ಮೆಸೇಜು 
ಒಳಗೊಳಗೆ ಏನೋ ಖುಷಿ, ಕಾತರ. 
ಕಾಲ್ ಮಾಡಿದರೆ out off coverage area.  
ನವೆಂಬರ್ ನಲ್ಲೂ ಮಾತಿಗೊಮ್ಮೆ  
ಯಾ ಟೆಲ್ಮಿ  ಎಂಬ ಅಂಗ್ಲ ಪದಗಳು 
ಕನ್ನಡವೇ ಉಸಿರೆಂದವರಿಗೆ ಅಪೊಲೋದಲ್ಲಿ  
ಅಕ್ಷಿಜನ್ ಹಾಕಲಾಗಿದೆ
ಬಿಳಿಯ ನರ್ಸಿನ ಕೈ ಸೋಕಿ ಮನಸು ಮಾಯಾಮೃಗ 
ರೂಪಾಯಿಗೆ ಎರಡೇ ಗಣೇಶ್ ಬೀಡಿ 
ಸಿಗರೇಟು ದುಬಾರಿ 
ಡಿಸೆಂಬರ್ ಚಳಿಯಲ್ಲು ಮಲ್ಯ ನೆನಪಾಗುತ್ತಾನೆ 
ಅವಳ ಕಾಲೇಜ್ ಮುಂದೆ ನಿಂತು 
ಕಾಯುವ ಸಂಭ್ರಮ 
ನೀನು ನಕ್ಕರೆ ಹಾಲು ಸಕ್ಕರೆ 
ಸ್ವರ್ಗದಲ್ಲಿ ಸೆರೆವಾಸ 
ಜೇಬಿನಲ್ಲಿ ಹತ್ತೇ ರೂಪಾಯಿ 
ರಾತ್ರಿ ಕನಸು ಚಂದಮಾಮ 
ಬೆಳಗೆ ಬದುಕು ಉದಯ ಕಿರಣ. . .

Tuesday, August 28, 2012

ನೆನಪಾಗುವುದಿಲ್ಲ

 

ನೆನಪಾಗುವುದಿಲ್ಲ 

 

 

ಈಗೀಗ ನಿನ್ನ ನೆನಪಾಗುವುದಿಲ್ಲ 
ಸಂಜೆಯಲ್ಲಿ ದುಡಿದ ಆಯಾಸ 
ಕೈ ಬೀಸಿ ಕರೆಯುತ್ತದೆ 
ಊರ ಹೊರಗಿನ ಮಧ್ಯದಂಗಡಿ 

ಮಂದ ಬೆಳಕಿನಲ್ಲಿ ಮುಖ ಕಾಣಿಸುವುದಿಲ್ಲ 
ಮಾತು ಕೇಳಿಸುತ್ತವೆ 
ಮೇಜಿನ ಮೇಲೆ ಗ್ಲಾಸಿನ ತುಂಬ 
ಉಕ್ಕಿ ಹರಿಯುವ ಬಿಯರು 
ಬೆರಳ ಸಂದಿಯಲ್ಲಿ ಅರ್ಧ 
ಉರಿದ ಸಿಗರೇಟು 
ನಿನ್ನ ನೆನಪಾಗುವುದಿಲ್ಲ 

ಊಟದ ಶಾಸ್ತ್ರ ಮುಗಿಸುತ್ತೇನೆ 
ಬಿಡಿ ದೀಪಗಳು ನಿದ್ರಿಸುವುದಿಲ್ಲ 
ಊರ ಜನರಿಗೆಲ್ಲ ಅರ್ಧ ಬೆಳಕಾಗಿರುತ್ತದೆ 
ರಾತ್ರಿ ಪಾಳಿಯ ನಾಯಿಗಳು ಬೊಗಳುತ್ತಿರುತ್ತವೆ 
ಒಬ್ಬಂಟಿ ನಾನು ರಸ್ತೆಯಲ್ಲಿ 
ನಿನ್ನ ನೆನಪಾಗುವುದಿಲ್ಲ 

ಯಾವ ತೊಂದರೆ ಇಲ್ಲದೆ ಮನೆ  ಸೇರುತ್ತೇನೆ 
ಬಾಗಿಲು ಹಾಕುವುದ ಮರೆಯುವುದಿಲ್ಲ 
ಮಂಚ ಹಾಸಿಗೆ ಬೇಕೆಂದಿಲ್ಲ 
ನೆಲದ ಮೇಲೆ ಮಲಗುತ್ತೇನೆ ಕಣ್ಣು ಮುಚ್ಚಿ 
ಕನಸುಗಳಿರುತ್ತವೆ . . . .
ನೀನಿರುವುದಿಲ್ಲ. . . . . .!