Tuesday, September 11, 2012

ಆ ಬೀದಿಯಲ್ಲಿ ಗಣೇಶನಿಲ್ಲ

ಆ ಬೀದಿಯಲ್ಲಿ ಗಣೇಶನಿಲ್ಲ



ನಾಲ್ಕು ಪಥದ ರಸ್ತೆಯಲ್ಲಿ ಕಾರು ಚಲಿಸುತ್ತಿತ್ತು ಮನಸ್ಸಿನಲ್ಲಿ ಗತಃಕಾಲದ ನೆನಪುಗಳು ಘಟನೆಗಳಷ್ಟೆ ಮುಖ್ಯವಾದ್ದರಿಂದ ಇಸವಿ, ತಾರೀಖು, ದಿನ, ಊರು, ಸಮಯ ಅಷ್ಟು ಮುಖ್ಯವಲ್ಲ. ಸ್ವಲ್ಪ ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿದ್ದಾಗ ನಮ್ಮ ಕುಟುಂಬವು ಅಲ್ಲೆ ಇತ್ತು. ಚಿಕ್ಕಂದಿನಲ್ಲಿ ಎಲ್ಲರಿಗೂ ದೇವರ ಮೇಲೆ ಇರುವಂತಹ ಭಯ ಭಕ್ತಿ ನನಗೂ ಇತ್ತು ಅದರಲ್ಲು ಗಣೇಶನೆಂದರೆ ಏನೋ ಒಂದು ಅಭಿಮಾನ.
ನಮ್ಮ ಮನೆಯಿಂದ ಎಡಕ್ಕೆ ತಿರುಗಿ ರಸ್ತೆ ದಾಟಿದರೆ ಆ ಬದಿಯಲ್ಲಿ ಒಂದು ಗಣೇಶನ ದೇವಸ್ಥಾನ. ಅಲ್ಲಿ ಪ್ರತಿನಿತ್ಯ ಪೂಜೆಗಳು ನಡೆಯುತ್ತಿದ್ದವು. ನಮ್ಮ ಮನೆಯಂಗಳದಲ್ಲಿ ಬಿಡುತ್ತಿದ್ದ ಹೂಗಳನ್ನು ದಿನ ನಿತ್ಯ ಬೆಳಿಗ್ಗೆ, ಸಂಜೆ ಕೊಟ್ಟು ನಮಸ್ಕರಿಸಿ ಬರುವುದು ರೂಢಿಯಾಗಿತ್ತು.
ಹೀಗೆ ಒಂದು ಬೆಳಗ್ಗೆ ಅರ್ಚಕರಿಗೆ  ಹೂವು ಕೊಡುತ್ತಿರಬೇಕಾದರೆ ಹಿಂದಿನಿಂದ ಒಂದು ಹೆಣ್ಣು ಧ್ವನಿ ಕೇಳಿಸಿತು ಹುಡುಗು ಸಹಜ ಕುತೂಹಲದಿಂದ ತಿರುಗಿ ನೋಡಿದೆ ಹೂ ಹಿಡಿದು ಹೂವಿನಂತ ಚೆಲುವೆಯೊಬ್ಬಳು ನಿಂತಿದ್ದಳು. ದೇವಲೋಕದ ಅಪ್ಸರೆ ರಂಭೆ, ಊರ್ವಶಿ, ಮೇನಕೆ ಇವರ್ಯಾರು ಕಾಣದೆ ಅವಳಲ್ಲಿ ಅವಳನ್ನು ಮಾತ್ರ ಕಂಡೆ. ಇಲ್ಲೆ ಹುಟ್ಟಿ ಬೆಳೆದಂತ ಚೆಲುವೆ. ನನಗೆ ಬುದ್ದಿ ಬಂದಾಗಲಿಂದಲು ರಂಭೆ, ಊರ್ವಶಿ, ಮೇನಕೆಯರಿಗೆ ವಯಸ್ಸಾದ ಕಥೆ ಕೇಳಿಲ್ಲ ಅವರು ಯಾವಾಗಲು ಚಿರ ಯುವತಿಯರು. ನಾವು ಕೇಳಿದ, ಓದಿದ, ನೋಡಿದ ಕಥೆ, ಸಿನಿಮಾ ಇತ್ಯಾದಿಗಳಲ್ಲಿ ಬರುವ ಪಾತ್ರಗಳನ್ನು ನಿಜವೆಂದು ಭ್ರಮಿಸಿರುತ್ತೇವೆ. ನಮಗೆ ವಯಸ್ಸಾದರೂ ನಾವು ಕಂಡು ಕೇಳಿದ ಪಾತ್ರಗಳಿಗೆ ವಯಸ್ಸಾಗುವುದಿಲ್ಲ.
ನಾನು ತಿರುಗಿ ನೋಡಿದ್ದು ಅವಳಿಗೆ ತಿಳಿದಿರಬಹುದು ಅಥವಾ ಅದರ ಪರಿವೆ ಇಲ್ಲದಿರಬಹುದು ಅವಳು ಅರ್ಚಕರಿಗೆ ಹೂ ಕೊಡುತ್ತಿದ್ದಳು. ಒಮ್ಮೊಮ್ಮೆ ಸಂಜೆ ಬಿಡುವಾದಾಗ ದೇವಸ್ತಾನದ ಅರ್ಚಕರ ಜೊತೆ ಮಾತಿಗಿಳಿಯುತ್ತಿದ್ದೆ. ಅವರು ಏನು ಹೇಳಿದರು ಎಂಬುದು ಅಸ್ಪಷ್ಟವಾಗಿದೆ ಆದರು ಪ್ರಯತ್ನಿಸುತ್ತೇನೆ. ಮೊದಲು ದೇವಸ್ಥಾನದ ಪೂಜೆಯನ್ನು ಅವರ ದೊಡ್ಡಪ್ಪ ಮಾಡುತ್ತಿದ್ದರಂತೆ. ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ಇವರಿಗೆ ವೇದ ಮಂತ್ರಗಳನ್ನು ಕಳಿಸಿ ಇದೇ ನಿನ್ನ ವೃತ್ತಿ ಎಂದರಂತೆ ಹಾಗೆ ಹೇಳುವಾಗ ಅವರ ಮುಖದಲ್ಲಿ ಯಾವುದೆ ಭಾವ ವ್ಯಕ್ತವಾಗಲಿಲ್ಲ್ಲ ಬಹುಶಃ ಅವರು ತಮ್ಮ ವೃತ್ತಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು  ಅನ್ನಿಸುತ್ತದೆ. ಈಗ ಇವರಿಗು ಸಾಕಷ್ಟು ವಯಸ್ಸಾಗಿದೆ ಒಬ್ಬನೆ ಮಗನನ್ನು ಶೃಂಗೇರಿಯಲ್ಲಿ ವೇದಾಭ್ಯಾಸಕ್ಕೆ ಬಿಟ್ಟಿದ್ದಾರೆ ಅವನು ಇವರ ಕಂಟ್ಯುನಿಟಿ.!
ಹೇಗ್  ನಡೆಯುತ್ತೆ? ಜನ ಬರ್ತಾರ? ನಿಮ್ಮ ಜೀವನಕ್ಕೆ ಸಾಕಾಗುತ್ತ ಇಲ್ಲಿಯ ಸಂಪಾದನೆ, ಕೇಳಿದೆ. ಪರವಾಗಿಲ್ಲ . . . . ಜನ ಸಾಕಷ್ಟು ಬರ್ತಾರೆ ಬಿಡುವಿನಲ್ಲಿ ಪೌರೋಹಿತ್ಯ ಮಾಡುತ್ತೇನೆ ಬಂದವರಿಗೆ ಇಲ್ಲೆ ಪಂಚಾಂಗ ನೋಡಿ ಹೇಳುತ್ತೇನೆ ಅಪ್ಪನ ಆಸ್ತಿ ಅಂತ ಮನೆ ಇದೆ, ಜೀವನಕ್ಕೆ ಸಾಕು ದೇವರು ಹೀಗೆ ಇಟ್ಟಿರ್ಲಿ ಎಂದು ನಿಟ್ಟುಸಿರು ಬಿಟ್ಟರು.
ಈ ಮಧ್ಯೆ ಹಲವಾರು ಬಾರಿ ನಾನು ಆ ಹುಡುಗಿಯನ್ನು ಸಂದಿಸಿದ್ದೆ ಆದರು ಯಾವತ್ತು ಮಾತನಾಡಿಸುವ ಪ್ರಯತ್ನ ಮಾಡಲಿಲ್ಲ ಬಹುಶಃ ನನ್ನ ego ಅದಕ್ಕೆ ಅಡ್ಡ ಬಂತು ಅಂತ ಈಗ ಅನ್ನಿಸುತ್ತಿದೆ. ಒಮ್ಮೊಮ್ಮೆ ಮುಖಾ ಮುಖಿ ಬೇಟಿಯಾದಾಗ ಕಣ್ಣಲ್ಲೆ ನಗುತ್ತಿದ್ದೆವು ಅದನ್ನು ಯಾವ ರೀತಿ ಬೇಕಾದರು ಅರ್ಥೈಸಬಹುದಿತ್ತು ಆದರೆ ನಾನದರ ಗೋಜಿಗೆ ಹೋಗಲಿಲ್ಲ.
ಕಾಲ ಸರಿದಂತೆ ಕಾರಣಾಂತರಗಳಿಂದ ನಮ್ಮ ಕುಟುಂಬ ಉರು ಬಿಡಬೇಕಾಯಿತು ಮತ್ತೆ ಅದರ ನೆನಪಾಗಲಿಲ್ಲ. ಆದರೆ ಇಂದು ಯಾವುದೊ ಕೆಲಸದ ನಿಮಿತ್ತ ಆ ಊರಿಗೆ ಹೋಗಬೇಕಾಗಿ ಬಂದದ್ದರಿಂದ ಇದೆಲ್ಲ ನೆನಪಾಯಿತು. ಆಗಿದ್ದ ಕಿರು ದಾರಿ ನನ್ನನೇ ಅಣಕಿಸುವಷ್ಟು ಸಿಂಗಾರಗೊಂಡಿತ್ತು ಅಲ್ಲಿದ್ದ ದೇವಸ್ಥಾನವು ಕಾಣಲಿಲ್ಲ. ಯಾರೊ ಹೇಳಿದರು ಆ ದೇವಸ್ಥಾನವನ್ನು ರಸ್ತೆ ಅಗಲಿಕರಣದ ಸಮಯದಲ್ಲಿ ಒಡೆದು ಹಾಕಿದರು ಎಂದು, ಹಾಗಾದರೆ ಆ ಅರ್ಚಕರು ಎಲ್ಲಿಗೋದರು, ಆ ಹುಡುಗಿ ಈಗ ಹೇಗಿರಬಹುದು, ಅರ್ಚಕರ ಮಗ ಈಗೇನು ಮಾಡುತ್ತಿರಬಹುದು, ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನಿಗೆ ವಿಘ್ನವೆ? ಎಂದು ಯೋಚಿಸುತ್ತಿದ್ದೆ. ರಸ್ತೆಯಲ್ಲಿ ಹೋಗಿ ಬರುವ ಜನರು ಅಲ್ಲಿನ್ನೂ ದೇವರಿದ್ದಾನೆ ಎಂಬ ನಂಬಿಕೆಯಲ್ಲಿ ಕ್ಷಣಕಾಲ ನಿಂತು ಕೈ ಮುಗಿದು ಮುನ್ನಡೆಯುತ್ತಿದ್ದರು. . .


No comments:

Post a Comment